ಗುರುವಾರ, ಆಗಸ್ಟ್ 25, 2011

ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಕಳಕಳಿ

            ಕಲಘಟಗಿ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಗೋಷ್ಠಿ


     ಮನುಷ್ಯ ಸಂಘಜೀವಿ, ಒಬ್ಬಂಟಿಯಾಗಿ ಬದುಕಲಾರ, ಸಂಘಜೀವಿಯಾಗಿ ಬದುಕಲು ಮನುಷ್ಯನಿಗೆ ಸಂಪರ್ಕ ಬೇಕೆ ಬೇಕು, ಹೀಗಾಗಿ ಮನುಷ್ಯ ಸಂಪರ್ಕ ಹೊಸ ಹೊಸ ಸಂಪರ್ಕ ಸಾಧನಗಳನ್ನು ಅರಸತ್ತೇಲೇ ಇದ್ದಾನೆ, ತನ್ನ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಮನುಷ್ಯ ಮೊದಲು ಕಂಡುಕೊಂಡಿದ್ದು ಸನ್ನೆ ಮಾತುಗಾರಿಕೆ. ಮನುಷ್ಯನ ಬುದ್ಧಿವಂತಿಕೆ ಬೆಳೆದಂತೆ ಸಂವಹನಕ್ಕಾಗಿ ಮನುಷ್ಯ ಬೇರೆ ಬೇರೆ ಸಾಧನಗಳನ್ನು ಬಳಸತೊಡಗಿದ, ತಂತ್ರಜ್ಞಾನದ ಕೊರತೆ ಇದ್ದ ಕಾಲದಲ್ಲೂ ಸಮೂಹ ಮಾಧ್ಯಮಗಳ ಅಸ್ಥಿತ್ವವನ್ನು ಅಲ್ಲಗಳೆಯುವಂತಿಲ್ಲ. ಪುರಾತನ ಕಾಲದಲ್ಲಿ ಮಾತುಗಾರಿಕೆ, ಡಂಗೂರ, ನಗಾರಿ ಗಂಟೆಗಳೂ ಮಾಧ್ಯಮಗಳಾದ್ದವು. ಸಾಹಿತ್ಯ, ಜನಪದ ಸಾಹಿತ್ಯ, ರಂಗಭೂಮಿ,ನಂತರದ ಸೇರ್ಪಡೆಗಳಾದ್ರೆ ಈಚಗೆ ವೃತ್ತ ಪತ್ರಿಕೆಗಳು, ನಿಯತಕಾಲಿಕೆಗಳು, ಬಾನುಲಿ, ದೂರದರ್ಶನ ಸೇರ್ಪಡೆಗೊಂಡಿವೆ. ದಿನೇ ದಿನೇ ಸಮೂಹ ಮಾಧ್ಯಮಗಳ ವ್ಯಾಪ್ತಿ ವಿಸ್ತರ್ಣೆಗೊಳ್ಳುತ್ತಲೇ ಇದೆ ಕಂಪ್ಯೂಟರ್, ಇಂಟರ್ನೆಟ್,ಮೊಬೈಲ್,  ಫೇಸ್ ಬುಕ್ ನಂಥಹ ಸಾಮಾಜಿಕ ತಾಣಗಳೂ ಸಮೂಹ ಮಾಧ್ಯಮಗಳ ಸಾಲಿಗೆ ಸೇರಯತ್ತಿವೆ. ಇದೀಗ ಸಮೂಹ ಮಾಧ್ಯಮಗಳ ವ್ಯಾಪ್ತಿ ದೊಡ್ಡದಾಗಿದೆ. ಸಮೂಹ ಮಾಧ್ಯಮಗಳು ಒಂದು ವ್ಯವಸ್ಥೆ ಹಾಗೂ ಮತ್ತೊಂದು ವ್ಯವಸ್ಥೆಯ ಸಂಪರ್ಕದ ಕೊಂಡಿಯಾಗಿರುತ್ತವೆ.ಸಮೂಹ ಮಾಧ್ಯಮಗಳು ಸರಕಾರ ಹಾಗೂ ಜನರ ನಡುವೆ, ಆಡಳಿತ ಹಾಗೂ ಜನರ ನಡುವೆ ಸಂಪರ್ಕದ ಕೊಂಡಿಗಳಾಗಿ ನಿಲ್ಲುತ್ತವೆ

      ಸಮೂಹ ಮಾಧ್ಯಮಗಳ ಮೂಲ ಉದ್ದೇಶವೇ ಆರೋಗ್ಯಪೂರ್ಣ ಸಮಾಜದ ನಿರ್ಮಾಣ. ಸಾಮಾಜಿಕ ಕಳಕಳಿ ಹೊಂದಿರುವ ಕಾರಣಕ್ಕಾಗಿನೇ ಹಲವಾರು ಮಾಧ್ಯಮಗಳು ಇನ್ನೂ ಸಮೂಹ ಮಾಧ್ಯಮಗಳ ಪಟ್ಟಿಯಲ್ಲಿ ಉಳಿದುಕೊಂಡಿವೆ. ತಂತ್ರಜ್ಞಾನದ ಆವಿಷ್ಕಾರದಲ್ಲಿ ಪೈಪೋಟಿ ಮಾಡದೇ ಕೆಲವು ಮಾಧ್ಯಮಗಳು ತೆರೆಯ ಮರೆಗೆ ಸರಿಯತೊಡಗಿದ್ದರೂ ಸಮಾಜ ಕಟ್ಟುವಲ್ಲಿ ಅವುಗಳು ನಿರ್ವಹಿಸಿದ ಪಾತ್ರವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಸಮಾಜಿಕ ಕಳಕಳಿ ಇಟ್ಟುಕೊಂಡು ವ್ಯವಸ್ಥೆಗೆ ಲಗ್ಗೆ ಇಟ್ಟ ಮಾಧ್ಯಮಗಳಲ್ಲಿ ಪ್ರಸಾರ ಮಾಧ್ಯಮ ಅಥವಾ ಸುದ್ಧಿ ಮಾಧ್ಯಮ  ಉಳಿದೆಲ್ಲ ಮಾಧ್ಯಮಗಳಿಗಿಂತ ಹೆಚ್ಚು ಜವಾಬ್ದಾರಿಯನ್ನ ಪ್ರಬುದ್ಧವಾಗಿ ನಿರ್ವಹಿಸಿವೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಇಂದಿನ ಅಣ್ಣಾ ಹಜಾರೆ ಹೋರಾಟದ ವರೆಗೆ ಮಾಧ್ಯಮಗಳು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಇತಿಹಾಸದಿಂದ ಕಿತ್ತುಹಾಕಲು ಸಾಧ್ಯವಿಲ್ಲ. ಸಾಮಾಜಿಕ ಕಳಕಳಿ ಹೊಂದಿರುವ ಸಮೂಹ ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯನಿರ್ಹಿಸಿರೋದು ಪ್ರಜಾಪ್ರಭುತ್ವದ ಮೂಲಕ ಸಾಮಾಜದ ಉಳಿವಿಗೆ ಕಾರಣವಾಗಿದೆ ಅಂದ್ರೆ ಅತಿಶಯೋಕ್ತಿ ಆಗಲಾರದು.  ಸಂವಿಧಾನದ ಕಾವಲು ನಾಯಿಯಾಗಿ ಸಮೂಹ  ಮಾಧ್ಯಮಗಳು ಕೆಲಸ ಮಾಡ್ತಾ ಇರೋದ್ರಿಂದಾಗಿ ಕೆಲವರ ಕೈಯಿಂದ ಸಂವಿಧಾನವನ್ನು ಉಳಿಸಲು ಸಾಧ್ಯವಾಗಿದೆ. ಇದೇ ಕಾರಣಕ್ಕೆನೆ ಸಮೂಹ ಮಾಧ್ಯಮಗಳು  ಇಂದು ಸಂವಿಧಾನದ ನಾಲ್ಕನೇ ಅಂಗ ಎಂಬ ಖ್ಯಾತಿಗೆ ಗಳಿಸಿವೆ.
  
      ಸಮೂಹ ಮಾಧ್ಯಮಗಳು ಕಾರ್ಯನಿರ್ವಹಿಸಲು ಭಾರತ ದೊಡ್ಡ ಸವಾಲು. ಭಾರತ ಬಹುಭಾಷಾ ದೇಶ, ಎಲ್ಲರನ್ನೂ ಒಂದೇ ತೆಕ್ಕೆಗೆ ತೆಗೆದುಕೊಳ್ಳುವ ಭಾಷೆಯ ಕೊರತೆ ಇನ್ನೂ ವರೆಗೂ ದೇಶದಲ್ಲಿದೆ. ಭೌಗೋಳಿಕ ಪರಿಸರವೂ ಒಂದೇ ರೀತಿಯಲ್ಲಿಲ್ಲ, ದೇಶದ ಸಾವಿರಾರು ಹಳ್ಳಿಗಳಿಗೆ ಸರಿಯಾದ ರಸ್ತೆಗಳಿಲ್ಲ, ವಿದ್ಯುತ್ ಇಲ್ಲ ಹೀಗಾಗಿ ವೃತ್ತಪತ್ರಿಕೆಗಳು ಹಾಗೂ ದೂರದರ್ಶನ ತಲುಪುವದು ಕನಸಿನ ಮಾತಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅನಕ್ಷರತೆ ಮುದ್ರಣ ಮಾಧ್ಯಮಕ್ಕೆ ಶಾಪವಾಗಿ ಕಾಡಿದ್ರೆ ದೃಶ್ಯ ಮತ್ತು ಶ್ರವಣ ಮಾಧ್ಯಮಗಳಿಗೆ ಬಡತನ ಗುಮ್ಮ ಕಾಡುತ್ತದೆ. ಬಹುಸಂಖ್ಯಾತ ಹಳ್ಳಿಗಳ ಜನ ಬಿಡುವಿಲ್ಲದ ದುಡಿಮೆಯಿಂದಾಗಿ ಸಂಜೆ ವೇಳೆ ಸಮೂಹ ಮಾಧ್ಯಮಗಳಿಂದ ಶುದ್ಧ ಮನರಂಜನೆಯನ್ನು ಮಾತ್ರ ಬಯಸುತ್ತಾರೆ. ಇಂಥಹ ಹತ್ತು ಹಲವು ಕಾರಣಗಳಿಂದ ಸಮೂಹ ಮಾಧ್ಯಮಗಳು ದೇಶದ ಪ್ರತಿಯೊಬ್ಬರನ್ನೂ ತಲುಪಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಸಾಮಾಜಿಕ ಕಳಕಳಿ ಇಟ್ಟುಕೊಂಡಿರೋ ಸಮೂಹ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸರಕಾರ ಹೇರಿರೋ ಕೆಲ ಕಟ್ಟುಪಾಡುಗಳೂ ಕೂಡಾ ಸಮೂಹ ಮಾಧ್ಯಮಗಳ ಹಿನ್ನಡೆಗೆ ಕಾರಣವಾಗಿದೆ.
 
       ಇಂಥಹ ಜವಾಬ್ದಾರಿಯುತ ಪತ್ರಿಕೋಧ್ಯಮ ತೀರಾ ಇತ್ತೀಚಗೆ ಅನಿವಾರ್ಯತೆಗೆ ಕಟ್ಟುಬಿದ್ದು ವ್ಯಾಪಾರಿಕರಣಗೊಳ್ಳುತ್ತಿವೆ. ಇದರಿಂದಾಗಿ ಎಲ್ಲೋ ಒಂದು ಕಡೆ ಮೂಲ ಉದ್ದೇಶಕ್ಕೆ ಚ್ಯುತಿ ಬರ್ತಾ ಇದೆ ಅನ್ನೋದನ್ನ ಒಪ್ಪಿಕೊಳ್ಳಲೇ ಬೇಕು. ಪತ್ರಿಕೋಧ್ಯಮ ಹಾಗೂ ಪತ್ರಿಕೋಧ್ಯಮದ ಬಳಗ ಬದುಕಬೇಕು ಅನ್ನೋದಾದ್ರೆ ವ್ಯಾಪಾರ ಕೂಡಾ ಅನಿವಾರ್ಯ. ಹಾಗಂತ ಪತ್ರಿಕೋಧ್ಯಮದ ಮೂಲ ಉದ್ದೇಶವನ್ನೇ ಮರೆತರೆ ಪ್ರಾಕೃತಿಕ ವ್ಯವಸ್ಥೆ ಕೈ ಕಟ್ಟಿಕುಳಿತುಕೊಳ್ಳೋದಿಲ್ಲ ಅನ್ನೋದಕ್ಕೆ ರೂಪರ್ಟ ಮುರ್ಡೋಕ ಹಾಗೂ ಕನಿಮೋಳಿ ಪ್ರಕರಣಗಳೇ ಸಾಕ್ಷಿ. ಆದ್ರೂ ಜನ ಬಯಸುವ ಸಂಗತಿಗಳ ಕೊಡೋ ಭರದಲ್ಲಿ ಕೆಲವು ಪ್ರಕರಣಗಳಿಗೆ ನ್ಯಾಯ ಸಿಕ್ಕದೇ ಇರೋದು ವಿಪರ್ಯಾಸ. ಈ ವಿಪರ್ಯಾಸಗಳ ಪಟ್ಟಿ ಟಿವಿ ಕಾರ್ಯಕ್ರಮಗಳಲ್ಲಿ ಇನ್ನೂ ಬೆಳೆಯುತ್ತಲೇ ಹೋಗುತ್ತದೆ. ಟಿಆರ್ ಪಿ ಹಿಂದೆ ಬಿದ್ದಿರೋ ಖಾಸಗಿ ದೂರದರ್ಶನಗಳು ಮೂಲ ದ್ಯೇಯವನ್ನು ಕಡೆಗಣೆಸೋದೇ ಹೆಚ್ಚು. ಮೂಲ ಉದ್ದೇಶಕ್ಕೆ ಧಕ್ಕೆ ತಂದ್ರೆ ಏನಾಗುತ್ತದೆ ಅನ್ನೋದನ್ನ ಸಮೂಹ ಮಾಧ್ಯಮಗಳು ಅರ್ಥಮಾಡಿಕೊಳ್ಳಬೇಕಾಗಿದೆ. ಆದ್ರೂ ವೃತ್ತಪತ್ರಿಕೆಗಳು, ಆಕಾಶವಾಣಿ ಹಾಗೂ ದೂರದರ್ಶನ ಸಮಾಜದ ಏಳ್ಗೆಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು
ಇಂದಿಗೂ ಪ್ರಸಾರ ಮಾಡ್ತಾ ಇರೋದ್ರದ ಹಿಂದೆ ಸಮಾಜಿಕ ಕಳಕಳಿ ಇರೋದನ್ನ ಮರೆಯೋಹಾಗಿಲ್ಲ.
ಸುದ್ಧಿ, ಸಂಗೀತ, ನಾಟಕ,ನೇರ ಪ್ರಸಾರ, ಕೃಷಿರಂಗ, ಯುವವಾಣಿ, ಮಹಿಳಾ, ಮಕ್ಕಳ , ಕಾರ್ಮಿಕ, ವೃದ್ಧರಿಗಾಗಿರೋ ಅನೇಕ ಕಾರ್ಯಕ್ರಮಗಳು, ಪರಿಸರ, ವಿಜ್ಞಾನ, ಸಾಹಿತ್ಯ, ಕುಟಂಬ ಕಲ್ಯಾಣ, ಆರೋಗ್ಯ ಜೊತೆ ಕೌಟುಂಬಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ತಮ್ಮ ಜವಾಬ್ದಾರಿಯನ್ನು ಮೆರೆಯುತ್ತಿವೆ.

          ಕರ್ನಾಟಕದಲ್ಲೂ ಸಮೂಹ ಮಾಧ್ಯಮಗಳ ಕೊಡುಗೆ ಅಪಾರ, 1843 ರಲ್ಲೇ ಮಂಗಳೂರು ಸಮಾಚಾರ ವೃತ್ತಪತ್ರಿಕೆ ಪ್ರಕಟವಾಯ್ತು, ನಂತರದಲ್ಲಿ 1926 ರಲ್ಲಿ ಮೈಸೂರಿನಿಂದ ತಾಯಿನಾಡು, 1931 ರಲ್ಲಿ ಪ್ರಜಾಮತ, 1933 ರಲ್ಲಿ ಹುಬ್ಬಳ್ಳಿಯಿಂದ ಸಂಯುಕ್ತ ಕರ್ನಾಟಕ, 1941 ರಲ್ಲಿ ನವಭಾರತ ಪ್ರತಿಕೆಗಳು ಸಮೂಹ ಮಾಧ್ಯಮಗಳ ಪಟ್ಟಿಗೆ ಸೇರ್ಪಡೆಗೊಂಡು ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿದವು. ಸ್ವಾತಂತ್ರ್ಯಾನಂತರ ಹಲವು ವೃತ್ತಪತ್ರಿಕೆಗಳು ನಿಯತಕಾಲಿಕೆಗಳು ಬಾನುಲಿ ದೂರದರ್ಶನ ಖಾಸಗಿ ದೂರದರ್ಶನ, ಎಫ್ ಎಂ ಹೀಗೆ ಹಲವು ಮಾಧ್ಯಮಗಳು ವಿಶ್ವದೆಲ್ಲಡೆಯಂತೆ ಕರ್ನಾಟಕಕ್ಕೂ ಲಗ್ಗೆ ಇಟ್ಟಿವೆ. ಸ್ವಾತಂತ್ರ್ಯ ಸಂಗ್ರಾಮದಿಂದ ಗಣಿ ಕ್ರಾಂತಿಯ ವರೆಗೆ ನಾಡಿನ ಸಮೂಹ ಮಾಧ್ಯಮಗಳು ಮಹತ್ವ ಪಾತ್ರ ನಿರ್ವಹಿಸಿವೆ. ಆದ್ರೆ ಮಲಿಯಾಳಂ, ತಮಿಳು ಹಾಗೂ ತೆಲಗು ಸಮೂಹ ಮಾಧ್ಯಗಳಿಗೆ ಹೋಲಿಸಿದ್ರೆ ಕನ್ನಡ ಸಮೂಹ ಮಾಧ್ಯಮಗಳನ್ನು ಕರ್ನಾಟಕದ ಜನ ಉಪಯೋಗಿಸಿಕೊಳ್ಳುವದು ಕಡಿಮೆನೆ. ಇದಕ್ಕೆ ಅನಕ್ಷರತೆ ಬಡತನ ಮೂಢನಂಬಿಕೆಗಳಂತಹ ಮೂಲಭೂತ ಸಮಸ್ಯೆಗಳೇ ಕಾರಣ.

      ಒಟ್ಟು ಪ್ರಸಾರದ ವೃತ್ತಪತ್ರಿಕೆಗಳಲ್ಲಿ ಶೇಕಡಾ 60 ರಷ್ಟು ಪ್ರಮುಖ ಪಟ್ಟಣಗಳಿಗೆನೆ ಸೀಮಿತವಾಗುತ್ತವೆ. ಇನ್ನು ಶೇಕಡಾ 30 ರಷ್ಟು ತಾಲೂಕಾ ಕೇಂದ್ರಗಳಿಗೆ ಮೀಸಲಾದ್ರೆ ಶೇಕಡಾ 5 ರಷ್ಟು ಹೋಬಳಿ ಕೇಂದ್ರಗಳಿಗೆ ತಲುಪುತ್ತವೆ. ಇನ್ನುಳಿದ ಶೇಕಡಾ 5ರಷ್ಟನ್ನು  ಹಳ್ಳಿಗಳು ಹಂಚಿಕೊಳ್ಳುತ್ತವೆ. ಹೀಗಾಗಿ ವೃತ್ತಪತ್ರಿಕೆಗಳು ನಿಯತಕಾಲಿಕೆಗಳು ಮಾಡ್ತಾ ಇರೋ ಸಮಾಜಮುಖು ಕಾರ್ಯಗಳು ಬಹುಸಂಖ್ಯಾತರಿಗೆ ತಲುಪುತ್ತಿಲ್ಲ. ದೂರದರ್ಶನಕ್ಕೆ ಈ ಸೀಮೆ ಇಲ್ದೆ ಇದ್ರೂ ಹಳ್ಳಿಗಳಲ್ಲಿನ ವಿದ್ಯುತ್ ಕೊರತೆ, ಟಿವಿ, ಕೇಬಲ್ ಕೊಳ್ಳಲಾಗದ ಬಡತನ, ದೂರದರ್ಶನದಿಂದ ಬಹುತೇಕರನ್ನು ದೂರ ಇಟ್ಟಿವೆ, ಬಾನುಲಿಯೊಂದೇ ಹಳ್ಳಿಗರನ್ನು ಸಮರ್ಪಕವಾಗಿ ತಲುಪಬಲ್ಲ ಮಾಧ್ಯಮ ಆದ್ರೆ ತೀರಾ ಈಚಗೆ ರೇಡಿಯೋಗಳನ್ನು ಮೂಲೆಗೆ ಸೇರಿಸಿರೋ ಹಳ್ಳಿಗರು ಟಿವಿ ನೋಡಲು ಕರೆಂಟ್ ಗಾಗಿ ಕಾದು ಕುಳಿತುಕೊಳ್ಳುವ ಸ್ಥಿತಿ ಇದೆ. ಇದರ ನಡುವೆ ಮೊಬೈಲ್ ಗಳಲ್ಲೂ ರೇಡಯೋದ ಅಲೆಗಳು ತೇಲಿ ಬರ್ತಾ ಇರೋದು ಈ ಕೊರತೆಯನ್ನು ನೀಗಿಸುತ್ತಿವೆ. ಆದ್ರೆ ಅದೇ ಮೊಬೈಲ್ ಅಗ್ಗದ ಜಾನಪದ ಗೀತೆಗಳ ಸ್ಟೋರ್ ರೂಂ ಆಗಿ ಬದಲಾಗ್ತಾ ಇದೆ. ಇಂಥಹ ಕಾರಣಗಳ ನಡುವೆ ಸಮೂಹ ಮಾಧ್ಯಮಗಳತ್ತ ಹಳ್ಳಿಗರನ್ನು ಕರೆತರುವ ಕೆಲಸ ಸಮೂಹ ಮಾಧ್ಯಮಗಳಿಂದ ಹಾಗೂ ಪ್ರಜ್ಞಾವಂತರಿಂದ ಆಗಬೇಕಾಗಿದೆ.

         ಕರ್ನಾಟಕದಲ್ಲಿ ಸಮೂಹ ಮಾಧ್ಯಮ ಕ್ರಾಂತಿಯನ್ನೇ ಉಂಟು ಮಾಡ್ತಾ ಇದ್ರೂ ಇನ್ನೂ ಹಲವಾರು ತಾಲೂಕುಗಳು ಕುಗ್ರಾಮಗಳಾಗಿವೇ ಉಳಿದಿವೆ. ಇಂಥಹ ಹಲವಾರು ತಾಲೂಕುಗಳಿಗೆ ಹೋಲಿಸಿದ್ರೆ ಕಲಘಟಗಿ  ಆ ಮಟ್ಟಿಗೆ ಅದೃಷ್ಠಶಾಲಿಯೇ ಸರಿ, ಉತ್ತರ ಕರ್ನಾಟಕದ ರಾಜಧಾನಿ ಎಂದೇ ಪರಿಗಣಿಸ್ಪಡುವ ಹುಬ್ಬಳ್ಳಿ-ಧಾರವಾಡಗಳನ್ನೇ ಕೇಂದ್ರ ಸ್ಥಾನವನ್ನಾಗಿಸಿಕೊಂಡು ಸಮೂಹ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಸಮೂಹ ಮಾಧ್ಯಮಗಳ  ಬೆಳಕು ಸಹಜವಾಗಿ ಕಲಘಟಗಿಯ ಮೇಲೆ ಪ್ರಖರವಾಗಿಯೇ ಬೀಳ್ತಾ ಇದೆ. ಪಕ್ಕದ ಕಾರವಾರ ಜಿಲ್ಲೆಯ ಜೋಯಿಡಾ ಒಂದು ತಾಲೂಕಾ ಕೇಂದ್ರವಾಗಿದ್ದರೂ ಮಾಧ್ಯಮಗಳ ಜೋಯಿಡಾದ ಸಮಸ್ಯೆಗಳನ್ನು ಬಿಂಬಿಸದೇ ಇರೋ ಕಾರಣಕ್ಕೆ ಇನ್ನೂ ಕುಗ್ರಾಮದಂತೆ ಭಾಸವಾಗುತ್ತದೆ. ಆದ್ರೆ ಕಲಘಟಗಿಯಲ್ಲಿ ನಡೆಯುವ ಸಮಾಜ ವಿರೋಧಿ ಚಟುವಟಿಕೆಗಳು ಸಮೂಹ ಮಾಧ್ಯಮಗಳ ಕಣ್ಣಂಚಿನಿಂದ ತಪ್ಪಿಸಿಕೊಳ್ಳಲಾರವು. ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳಲಾರವು. ಹಾಗೆನಾದ್ರೂ ಕುಂಠಿತಗೊಂಡಿದ್ದರೆ ಅದು ಸಂಬಂಧಿಸಿದವರ ಇಚ್ಛಾಶಕ್ತಿಯ ಕೊರತೆಯಾಗಿರುತ್ತದೆಯೇ ಹೊರತು ಮಾಧ್ಯಮಗಳ ವೈಪಲ್ಯವಲ್ಲ.

        ಸಮೂಹ ಮಾಧ್ಯಮಗಳನ್ನು ಕಲಘಟಗಿಯ ಸೀಮಿತ ಚೌಕಟ್ಟಿನ್ಲಲಿ ನೋಡುವದಾದ್ರೆ ಕಲಘಟಗಿಗೂ ಸಮೂಹ ಮಾಧ್ಯಮಗಳ ಕೊಡುಗೆ ಕಡಿಮೆ ಏನಲ್ಲ, ಇಲ್ಲಿನ ಐತಿಹಾಸಿಕ ಪಾರಂಪರಿಕ ಐತಿಹ್ಯಗಳು ಬೆಳಕಿಗೆ ಬಂದದ್ದು ಸಮೂಹ ಮಾಧ್ಯಮಗಳಿಂದಾನೆ, ಯುವತಿಯರ ಮಾರಾಟ ಜಾಲದಂತಹ ಸಮಾಜಬಾಹೀರ ಅಕ್ರಮಗಳು ಬೆಳಕಿಗೆ ಬಂದಿರೋದು ಮಾಧ್ಯಮಗಳಿಂದಲೇ, ಸಾತ ಶಹೀದನಂತಹ ಪವಿತ್ರ ಕ್ಷೇತ್ರದಲ್ಲಿ ಉಗ್ರಗಾಮಿಗಳು ಅಡಗಿದ್ದರು ಅನ್ನೋದನ್ನ ಮಾಧ್ಯಮಗಳೇ ಬಯಲಿಗೆಳೆದವು, ಕಲಘಟಗಿಯ ತೊಟ್ಟಿಲು ಇನ್ನೂ ತೂಗ್ತಾ ಇದೆ ಅಂದ್ರೆ ಅಲ್ಲಿ ಮಾಧ್ಯಮಗಳ ಹೊಣೆಗಾರಿಕೆ ಇದೆ ಅನ್ನೋದನ್ನ ಮರೆಯೋ ಹಾಗಿಲ್ಲ, ರೈತರ, ನೌಕರರ,ವಿದ್ಯಾರ್ಥಿಗಳ, ವೃದ್ಧರ ವ್ಯಾಪಾರಿಗಳ, ಬದುಕು ಭವಣೆಗಳನ್ನು ಸರಕಾರಕ್ಕೆ ಮುಟ್ಟಿಸೋದ್ರಲ್ಲಿ ಮಾಧ್ಯಮಗಳು ಹಿಂದೆ ಬಿದ್ದಿಲ್ಲ, ಗ್ರಾಮೀಣ ಹಾಗೂ ನಗರದ ಸಮಸ್ಯೆಗಳನ್ನು ಹತ್ತು ಹಲವು ಕೋನಗಳಿಂದ ಮಾಧ್ಯಮಗಳು ಬಿಂಬಿಸುತ್ತಾನೆ ಬಂದಿವೆ.

        ಇಷ್ಟಲ್ಲ ಇದ್ರೂ ಕಲಘಟಗಿ ಇನ್ನೂ ಸಮಸ್ಯೆಗಳ ಸುಳಿಯಲ್ಲಿ ಬೇಯುತ್ತಿದೆ. ನೂರಾರು ಸಮಸ್ಯೆಗಳು ಕಲಘಟಗಿಯನ್ನು ಕಿತ್ತು ತಿನ್ನುತ್ತಿವೆ. ಬಹುಪಾಲು ರೈತರಿಂದಲೇ ತುಂಬಿಹೋಗಿರೋ ತಾಲೂಕಿನಲ್ಲಿ ರೈತರ ಬದುಕು ತೀರ ಹದಗೆಟ್ಟಿದೆ, ಎಲ್ಲಡೆಯಂತೆ ಕಲಘಟಗಿ ತಾಲೂಕಿನಲ್ಲೂ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ, ರೈತರ ಮಕ್ಕಳು ಕೃಷಿ ಕಂಡ್ರೆ ಮೂಗು ಮುರಿಯುತ್ತಿದ್ದಾರೆ, ನೂರು ರೂಪಾಯಿಯ ಕೆಲಸ ಅರಿಸಿಕೊಂಡು ಖಾಸಗಿ ಕಾರ್ಖಾನೆಗಳ ಆಳಾಗುತ್ತಿದ್ದಾರೆ, ಕೃಷಿ ಕಾರ್ಮಿಕರು ತಮ್ಮ ವೃತ್ತಿಯಿಂದ ವರ್ಗಾವಣೆಗೊಳ್ಳುತ್ತಿದ್ದಾರೆ. ಇದಕ್ಕೆ ದೇಶಕ್ಕಿರುವ ಸಮಸ್ಯೆಗಳು ಕಲಘಟಗಿ ರೈತರನ್ನೂ ಆಕ್ರಮಿಸಿಕೊಂಡಿರೋದು ಸತ್ಯ.ಆದ್ರೆ ಇನ್ನು ಕೆಲವೇ ವರ್ಷಗಳಲ್ಲಿ ರೈತರು ಜಮೀನುಗಳನ್ನು ಬಿಟ್ಟು ಕಾರ್ಮಿಕರಾದ್ರೆ ಅಚ್ಚರಿ ಪಡಬೇಕಿಲ್ಲ, ಯಾಕಂದ್ರೆ ರೈತ ಅಂದ್ರೆ ಅನಕ್ಷರಸ್ಥ ಅನ್ನೋ ಕಾರಣಕ್ಕೆ ಮೋಸ ಮಾಡೋರೆ ಅಧಿಕ, ಕೆಲವು ಲಂಚಕೋರ ಅಧಿಕಾರಿಗಳು ಹಾಗೂ ದಾಳಿಕೋರ ದಲ್ಲಾಳಿಗಳು, ಕೆಲಸಕ್ಕೆ ಬಾರದ ಜನಪ್ರತಿನಿಧಿಗಳು, ಸರಕಾರದ ಅವೈಜ್ಞಾನಿಕ ಯೋಜನೆಗಳು ಉಳಿದೆಲ್ಲಡೆಯಂತೆ ಕಲಘಟಗಿ ರೈತರನ್ನೂ ಹಿಂಡಿ ಹಿಪ್ಪೆ ಮಾಡಿವೆ.
       ಕಲಘಟಗಿ ಮಲೆನಾಡ ಸೆರಗಿನಂಚಿನಲ್ಲಿರೋ ತಾಲೂಕು ಮಳೆಯಾಶ್ರಿತ ಬೇಸಾಯ ಸಾಮಾನ್ಯ, ಮಳೆ ಹೆಚ್ಚಾಗುತ್ತಿದ್ದ ಕೆಲವೇ ವರ್ಷಗಳ ಹಿಂದೆ ಭತ್ತದ ಕಲಘಟಗಿ ಭತ್ತದ ಕಣಜವಾಗಿತ್ತು, ಮಳೆ ಕಡಿಮೆಯಾದಂತೆಲ್ಲ ಕಲಘಗಿಯ ಭತ್ತ ತನ್ನ ಕಂಪು ಕಳೆದುಕೊಂಡಿತು ಬೆಲೆ ಕುಗ್ಗಿತು ಆಗ ಸುಪ್ರಸಿದ್ಧ ಭತ್ತದ ತಳಿಗಳು ಮಾಯವಾಗಿ ಆ ಜಾಗವನ್ನು ಸೋಯಾ ಅವರೆ, ತೋಟಗಾರಿಕೆ ಬೆಳೆಗಳು ಆಕ್ರಮಿಸಿಕೊಂಡಿವೆ, ಬದಲಾವಣೆ ಜಗದ ನಿಯಮ ನಿಸರ್ಗ ಪರಿಸ್ಥಿತಿ ಬದಲಾದಂತೆ ರೈತ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಬದಲಾಗಿದ್ದಾನೆ. ಇದು ರೈತನಿಗೆ ಅನಿವಾರ್ಯ ಕೂಡಾ ಆಗಿತ್ತು.  ಆದ್ರೆ ರೈತರು ಕೃಷಿಯಿಂದ ವಿಮುಖರಾಗ್ತಾ ಇರೋದು ಆತಂಕದ ಸಂಗತಿ, ರೈತರು ಜಮೀನುಗಳಲ್ಲೇ ನಿಲ್ಲಬೇಕು ಆಹಾರೋತ್ಪಾಧನೆಯಾಗಬೇಕು ಅಂದ್ರೆ ಕೇವಲ ಕಲಘಟಗಿಯೊಂದೇ ಬದಲಾದ್ರೆ ಸಾಕಾಗೋದಿಲ್ಲ ಇಡೀ ದೇಶದಲ್ಲಿ ರೈತನಿಗೆ, ರೈತ ಬೆಳೆದ ಬೆಳೆಗಳಿಗೆ ಅಗ್ರ ಸ್ಥಾನ, ವೈಜ್ಞಾನಿಕ ಬೆಲೆ ಸಿಕ್ಕಬೇಕಿದೆ, ಆದ್ರೂ ನೀರಾವರಿ ಇದ್ರೆ ರೈತರು ಬದಲಾವಣೆಯ ಮೂಲಕವಾದ್ರೂ ಕೃಷಿಯಲ್ಲೇ ರೈತರನ್ನು ನಿಲ್ಲಿಸಬಹುದು ಹೀಗಾಗಿ ಕಲಘಟಗಿಯಲ್ಲಿ ಸಮಗ್ರ ನೀರಾವರಿ ಯೋಜನೆಗಳು ಜಾರಿಯಾಗಬೇಕು, ಕೆರೆಗಳ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಮೂಹ ಮಾಧ್ಯಮಗಳು ಮಾಡಬೇಕಾದ ಕೆಲಸ ಬೇಕಾದಷ್ಟಿದೆ,
  
    ಕೃಷಿಯ ಮಹತ್ವದ ಬಗ್ಗೆ ರೈತರು ಅರಿತುಕೊಳ್ಳಬೇಕೆಂದ್ರೆ ಮೊದಲು ರೈತರನ್ನೆಲ್ಲ ಅಕ್ಷರಸ್ಥರನ್ನಾಗಿಸಬೇಕಿದೆ ಅದು ಕೇವಲ ಸಹಿ ಮಾಡುವ ಮಟ್ಟಿಗೆ, ದಾಖಲೆಗಳಿಗೆ ಸೀಮಿತವಾದ್ರೆ ಸಾಲದು ಅಕ್ಷರದ ಜೊತೆ ಅರಿವನ್ನು ಮೂಡಿಸುವಂತ ವಯಸ್ಕರ ಶಿಕ್ಷಣದ ವ್ಯವಸ್ಥೆ ಜಾರಿಯಾಗಬೇಕಿದೆ. ರೈತರನ್ನು ಭ್ರಷ್ಟರಿಂದ ದಾಳಿ ಕೋರ ದಲ್ಲಾಳಿಗಳಿಂದ ತಪ್ಪಿಸುವದು, ಸರಕಾರದ ಯೋಜನೆಗಳ ಲೋಪದೋಷಗಳನ್ನು ಎತ್ತಿತೋರಿಸುವದು, ಅವುಗಳ ಮಹತ್ವಗಳನ್ನು ಜನಕ್ಕೆ ತಿಳಿಸುವಂತ ಕೆಲಸ ಮಾಧ್ಯಮಗಳಿಂದ ನಡೆಯಬೇಕಿದೆ, ಆದ್ರೆ ಓದಲೇ ಬಾರದ ರೈತ ವರ್ಗ ಸಮೂಹ ಮಾಧ್ಯಮಗಳ ಕೆಲಸಕ್ಕೆ ಮನ್ನಣೆ ನೀಡುತ್ತಾರೆ ಎಂಬ ಭರವಸೆ ಇಲ್ಲ ಹೀಗಾಗಿ ಸಮೂಹ ಮಾಧ್ಯಮಗಳೆಂದು ಗುರುತಿಸ್ಪಡುವ ಇನ್ನಿತರ ಮಾಧ್ಯಮಗಳೂ ಈ ನಿಟ್ಟಿನಲ್ಲಿ ಕೈ ಜೋಡಿಸುವ ಅಗತ್ಯವಿದೆ.

      ಎಲ್ಲಿ ಅನಕ್ಷರತೆ ಇರತ್ತೋ ಅಲ್ಲಿ ಮೂಢನಂಬಿಕೆ ಕಂದಾಚಾರ ಅನಿಷ್ಟ ಪದ್ದತಿಗಳು ಜೀವಂತವಾಗುತ್ತವೆ ಅನ್ನೋದನ್ನ ಒಪ್ಪಿಕೊಳ್ಳಲು ಕಷ್ಟವಾದ್ರೂ ಅನಕ್ಷರತೆ ಇದ್ದಲ್ಲಿ ಇವುಗಳ ಪ್ರಮಾಣ ಹೆಚ್ಚು ಅನ್ನೋದಂತೂ ನಿಜ, ಹಾಗೆನೆ ಕಲಘಟಗಿ ತಾಲೂಕಿನಲ್ಲೂ ಇನ್ನೂ ಮೂಢನಂಬಿಕೆ, ವ್ಯವಸ್ಥಿತ ಅಕ್ರಮಗಳು ಜೀವಂತವಾಗಿವೆ. ಮಾಟ, ಮಂತ್ರ, ನಿಧಿ, ಬಲಿ, ಜಾತಿ, ಎಂದೆಲ್ಲ ಕೊರಗುವ, ಕಿತ್ತಾಡುವ ಜನಕ್ಕೆ ಸಮೂಹ ಮಾಧ್ಯಮಗಳು ದಾರಿ ದೀಪವಾಗಬೇಕಿದೆ, ಇಡೀ ಧಾರವಾಡ ಜಿಲ್ಲೆಯಲ್ಲಿನೇ ಯುವತಿಯರ ಮಾರಾಟಕ್ಕೆ ಕಲಘಟಗಿ ಕುಖ್ಯಾತಿಗಳಿಸಿದೆ. ಮದುವೆಯ ನೆಪದಲ್ಲಿ ಯುವತಿಯರನ್ನು ಪರರಾಜ್ಯಗಳಿಗೆ ಮಾರಾಟವಾಗುತ್ತಿದ್ದಾರೆ,ಈ ಅಕ್ರಮ ದಂಧೆಗೆ ಸಮಾಜದ ಮುಖ್ಯವಾಹಿನಿಯಲ್ಲಿರೋ ಕೆಲವು ವ್ಯಕ್ತಿಗಳು ಏಜೆಂಟರಾಗಿ ನಿಂತಿರೋದು ಈ  ದಂಧೆಯ ಕರಾಳ ರೂಪಕ್ಕೆ ಸಾಕ್ಷಿಯಾಗಿದೆ. ಇಂಥಹ ಪುಡಾರಿಗಳ ಬಣ್ಣ ಬಯಲು ಮಾಡುವ ಮೂಲಕ ಈ ಅನಿಷ್ಠಕ್ಕೆ ತೆರೆ ಎಳೆಯಬೇಕಾಗಿದೆ, ತಂದೆತಾಯಿಗಳೇ ತಾವೇ ಹೆತ್ತ ಮಕ್ಕಳನ್ನು ಹಣದಾಸೆಗೆ ಮಾರಾಟ ಮಾಡ್ತಾ ಇದ್ದಾರೆ ಇದರ ವಿರುದ್ಧ ಸಮರ ಸಾರೋದು ಸಾಮೂಹ ಮಾಧ್ಯಮಗಳ ಮುಖ್ಯ ದ್ಯೇಯವಾಗಬೇಕಿದೆ.

      ಪಕ್ಕದಲ್ಲೇ ಹುಬ್ಬಳ್ಳಿ ಎಂಬ ಮಹಾನಗರ ಇರೋದ್ರಿಂದ ಕಲಘಟಗಿ ವ್ಯಾಪಾರಕ್ಕೆ ಸೂಕ್ತ ಸ್ಥಳವಲ್ಲ ಅನ್ನೋ ಮಾತಿದೆ, ಕೆಲವು ಉದಾಹರಣೆಗಳನ್ನು ನೋಡಿದ್ರೆ ಇದು ನಿಜ ಕೂಡಾ ಅನ್ನಿಸದೇ ಇರಲ್ಲ, ಹೀಗಾಗಿ ಇದನ್ನ ಹೋಗಲಾಡಿಸಲು ತಾಲೂಕಿಗೊಂದು ಕೃಷಿಯಾಧಾರಿತ ಕಾರ್ಖಾನೆ ಅವಶ್ಯವಿದೆ, ತಾಲೂಕಿನಲ್ಲೇ ಉದ್ದಿಮೆ ಇದ್ರೆ ಜನ ಉದ್ಯೋಗ ಅರಸಿ ಪಟ್ಟಣದತ್ತ ಒಲಸೆ ಹೋಗುವದು ತಪ್ಪುತ್ತದೆ ಇನ್ನೊಂದಡೆ ಸಮಗ್ರ ನೀರಾವರಿ ಇದ್ರೆ ಸಾಕಷ್ಟು ಉದ್ಯೋಗವಕಾಶ ಕೃಷಿಯಲ್ಲೇ ಸಿಕ್ಕುತ್ತವೆ ಹೀಗಾಗಿ ಜನ ಪಟ್ಟಣದತ್ತ ಮುಖ ಮಾಡೋದಿಲ್ಲ ಆಗ ಪಟ್ಟಣದ ವ್ಯಾಪಾರೋಧ್ಯಮ ತನ್ನಿಂದ ತಾನೆ ಸುಧಾರಣೆಯಾಗುತ್ತದೆ,ತಾಲೂಕಿನಲ್ಲಿ ಕೃಷಿಯಾಧಾರಿತ ಉದ್ಧಿಮೆಯ ಮಹತ್ವವನ್ನು ಸಮೂಹ ಮಾಧ್ಯಮಗಳು ಸರಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ.

       ಕಲಘಟಗಿ ತಾಲೂಕಿನಲ್ಲಿ ಓದುವ ವಿದ್ಯಾರ್ಥಿಗಳಿಗೆ ಶಿಕ್ಷಣದ ಎಲ್ಲಾ ಮುಖಗಳೂ ತೆರೆದುಕೊಳ್ಳುವದೇ ಇಲ್ಲ. ಎಲ್ಲೋ ಕೆಲವು ವಿದ್ಯಾರ್ಥಿಗಳಿಗೆ ಮಾತ್ರ ಎಸ್ ಎಸ್ ಎಲ್ ಸಿ ನಂತ್ರ ಮುಂದೇನು ಎಂಬುದು ಗೊತ್ತಿರುತ್ತದೆ. ಆದ್ರೆ ಬಹುತೇಕ ವಿದ್ಯಾರ್ಥಿಗಳು ಅಪ್ಪ ಹಾಕಿದ ಆಲದ ಮರ ಅಂತ ಅದೇ ಆಯ್ಕೆಗಳಿಗೆ ಬಲಿಯಾಗಿ ಹೋಗ್ತಿದ್ದಾರೆ, ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣದ ಜಗತ್ತಿನ ಕಲ್ಪನೆಯನ್ನು ಕಟ್ಟಿಕೊಡುವ ಕೆಲಸ ಶಿಕ್ಷಣ ಸಂಸ್ಥೆಗಳಿಂದಲೂ ಆಗದೇ ಇರೋದು ವಿಪರ್ಯಾಸ, ತಾಲೂಕಿನಿಂದ ಇತ್ತೀಚಗಷ್ಟೇ ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ, ಆಡಳಿತ ಶಿಕ್ಷಣ, ತಂತ್ರಜ್ಞಾನದತ್ತ ವಿದ್ಯಾರ್ಥಿಗಳು ಆಸಕ್ತರಾಗುತ್ತಿದ್ದಾರೆ,ಇವರನ್ನು ಹುರುದುಂಬಿಸುವ ಈ ನಿಟ್ಟಿನಲ್ಲಿ ಗಮನ ಸೆಳೆಯುವ ಕಾರ್ಯ ಸಮೂಹ ಮಾಧ್ಯಮಗಳಿಂದಾಗಬೇಕಿದೆ,

      ಕಲೆ, ಸಾಹಿತ್ಯ ಸಂಸ್ಕೃತಿಯಲ್ಲಿ ಕಲಘಟಗಿಯಲ್ಲಿ ಹೆಮ್ಮೆಯ ಗರಿಗಳಿವೆ, ಇಲ್ಲಿನ ಜನಪದ ಸಂಪತ್ತು, ಸಾಹಿತ್ಯದ ಮೇಲೆ ಬೆಳಕು, ಕಲೆಗಳ ಅನಾವರಣ ಅಂದುಕೊಂಡಷ್ಟರ ಮಟ್ಟಿಗೆ ಮಾಧ್ಯಮಗಳಿಂದ ಆಗಿಲ್ಲ, ವಿದೇಶಿ ಸಂಸ್ಕೃತಿಯ ಕರಿನೆರಳು ಸಾಂಸ್ಕೃತಿಕ ರಂಗದ ಮೇಲೆ ಕಾಣಿಸಿಕೊಳ್ಳುತ್ತಿದೆ, ಅದು ಎಲ್ಲವನ್ನೂ ಅಪ್ಪಿಕೊಳ್ಳುವ ಮುನ್ನ ನಮ್ಮತನವನ್ನು ಉಳಿಸುವ ಕೆಲಸವಾಗಬೇಕಿದೆ,

     ಇಂಥಹ ಹತ್ತು ಹಲವಾರು ಸಮಸ್ಯೆಗಳ ಜವಾಬ್ಧಾರಿ ಮೂಟೆಯನ್ನು ಸಮೂಹ ಮಾಧ್ಯಮಗಳ ಹೆಗಲ ಮೇಲೆ ಹೊರಿಸೋದಾದ್ರೆ ಕಲಘಟಗಿಯ ಮಟ್ಟಿಗೆ ಸಮೂಹ ಮಾಧ್ಯಮಗಳಿಗೆ ಈ ಭಾರವನ್ನು ಹೊರುವ ಶಕ್ತಿ ಇಲ್ಲ ಅನ್ನೋದನ್ನ ವರದಿಗಾರನಾಗಿ ನಾನು ಹೇಳಲೇ ಬೇಕು, ಹೌದು ಈಗಾಗಲೇ ಪ್ರಸ್ಥಾಪಿಸಿದಂತೆ ಮಾಧ್ಯಮಗಳು ಸರಕನ್ನು ಮಾರಾಟ ಮಾಡುವ ವ್ಯಪಾರಿಗಳಾಗಿವೆ, ಹುಬ್ಬಳ್ಳಿ-ಧಾರವಾಡಕ್ಕೆ ಕೊಟ್ಟ ಮಹತ್ವವನ್ನು ಕಲಘಟಗಿಗೆ ಕೊಡಲು ಸಾಧ್ಯವಿಲ್ಲ. ಅದಕ್ಕೆ ಸಂಪಾದಕ ಮಂಡಳಿ ಒಪ್ಪೋದೂ ಕೂಡ ಇಲ್ಲ. ಹುಬ್ಬಳ್ಳಿಯಲ್ಲಿ ರಾತ್ರಿ ವೇಳೆ ನಾಯಿ ಜೋರಾಗಿ ಬೊಗಳಿದ್ರೂ ಸುದ್ಧಿಯಾಗತ್ತೆ, ಆದ್ರೆ ಹತ್ತಾರು ಎಕರೆ ಬೆಳೆ ನಾಶವಾದ್ರೂ ರೈತನ ಕಣ್ಣೀರು ಮುಸಕಾಗಿ   ಕಾಣಿಸುತ್ತದೆ, ಇದು ಸಮೂಹ ಮಧ್ಯಮಗಳ ಅನಿವಾರ್ಯತೆಯೂ ಹೌದು, ಕನ್ನಡ ಸಾಹಿತ್ಯ ಸಮ್ಮೇಳನವನ್ನು ಟಿವಿಯಲ್ಲಿ ತೋರಿಸಿದ್ರೆ ಜನ ನೋಡುವುದಿಲ್ಲ ಎಂಬ ಜನರ ನಾಡಿ ಮಿಡಿತವನ್ನು ಅರಿತಿರೋ ಟಿವಿ ಚಾನಲ್ ಗಳು ತಾಲೂಕಾ ಸಾಹಿತ್ಯ ಸಮ್ಮೇಳನದ ಪ್ರಸಾರಕ್ಕೆ ಒಪ್ಪೋದಿಲ್ಲ. ಯಾವಾಗಾ ಜನರ ದೃಷ್ಠಿ ಕೋನ ಬದಲಾಗುತ್ತದೋ ಆಗ ಮಾಧ್ಯಮಗಳ ದೃಷ್ಠಿಕೋನವೂ ಬದಲಾಗುತ್ತದೆ. ಹೀಗಾಗಿ ಜನ ತಮ್ಮ ದೃಷ್ಠಿಕೋನವೂ ಬದಲಿಸುವ ಅವಶ್ಯಕತೆ ಇದೆ,
      ಇದೇ ಕಾರಣಕ್ಕೆನೆ ತಾಲೂಕಾ ಕೇಂದ್ರಗಳಲ್ಲಿ ಸ್ಥಳೀಯ ಪತ್ರಿಕೆಗಳ ಅವಶ್ಯಕತೆ ಇರುತ್ತದೆ, ಬೇರೆ ತಾಲೂಕು ಜಿಲ್ಲೆಗಳಲ್ಲಿ ಹೋಲಿಸಿದಲ್ಲಿ ಕಲಘಟಗಿಯಲ್ಲಿ ಆ ಕೊರತೆ ಸಾಕಷ್ಟಿದೆ. ತಾಲೂಕಿನ ಅಭಿವೃದ್ಧಿಯನ್ನೇ ದ್ಯೇಯವನ್ನಾಗಿಸಿಕೊಂಡು ಅಚ್ಚಿಗೆ ನಿಂತುಕೊಂಡ ಪತ್ರಿಕೆಗಳು ಕಲಘಟಗಿ ಇತಿಹಾಸದಲ್ಲಿ ವಿರಳವೇ ಹಾಗೊಂದು ಪ್ರಯತ್ನ ನಡೆಸಿ ಸೋತವರೂ ಇದ್ದಾರೆ, ಇದಕ್ಕೆ ಕಾರಣ ಜನ ಪತ್ರಿಕೆಗಳನ್ನು ಕೊಂಡು ಓದುವದಿಲ್ಲ ಎಂಬ ದೂರು, ಈ ಕೊರಗಿನ ನಡುವೆನೆ ಜನ ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕಿದೆ. ಸ್ಥಳೀಯ ಪತ್ರಿಕೆಗಳು ಹೇಗಾದ್ರೂ ಆಗಲಿ ಲಾಭವಾಗಬೇಕು ಹಣ ಬರಬೇಕು ಉದ್ದೇಶದಿಂದ ದೂರ ಉಳಿಯಬೇಕು ಅಂದಾಗ ಯಶಸ್ಸು ಸಿಕ್ಕೇಸಿಕ್ಕುತ್ತದೆ, ಯಶಸ್ಸಿನ ಹಿಂದೆ ಎಲ್ಲವೂ ಬರುತ್ತದೆ ಅನ್ನೋದನ್ನ ನೆನಪಿಡಬೇಕು.
       ಜನ ಸಮೂಹ ಮಾಧ್ಯಮಗಳ ಪ್ರತಿನಿಧಿಗಳು ತಮ್ಮ ಮೂಗಿನ ನೇರಕ್ಕೆ ಸುದ್ಧಿ ಬರೆಯಬೇಕು ಅನ್ನೋ ಕೆಲವರು ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕಿದೆ,ಬಂದ ಸುದ್ಧಿಯೇ ಕೆಲವರಿಗೆ ಬಂಡವಾಳಗೋದು ನಿಲ್ಲಬೇಕಿದೆ, ಎಲ್ಲ ಸುದ್ಧಿಗಾರರನ್ನೂ  ಹಳದಿಕಣ್ಣಿನಿಂದ ನೋಡುವದು ತರವಲ್ಲ, ನೀವು ನಿಲುಕಿಸುವ ಸುದ್ಧಿಯಲ್ಲಿ ಗಟ್ಟಿತನ ಇದ್ದರೆ ಎಲ್ಲಿದ್ದರೂ ಅದಕ್ಕೆ ನ್ಯಾಯ ಸಿಕ್ಕೇಸಿಕ್ಕುತ್ತದೆ.  ಸ್ಥಳೀಯ ಬರಹಗಾರ ಸುದ್ಧಿಗಾರನ ಆರ್ಥಿಕ ಪರಿಸ್ಥಿತಿಯನ್ನೂ ಜನ ಅರಿತುಕೊಳ್ಳೋ ಅಗತ್ಯವಿದೆ, ಸಮೂಹ ಮಾಧ್ಯಮಗಳು ಕೊಡುವ ಪುಡಿಗಾಸಿನಲ್ಲಿ ಜೀವನ ನಡೆಸೋದು ಸ್ಥಳೀಯ ಸುದ್ಧಿಗಾರನಿಗೆ ಸಾಧ್ಯವಿಲ್ಲ, ಇದೇ ಕಾರಣಕ್ಕೆನೆ ಸ್ಥಳೀಯ ಸುದ್ಧಿಗಾರ ಚಿಕ್ಕಸುದ್ಧಿಗಳನ್ನು ಉದಾಶೀನ ಮಾಡುವದೇ ಹೆಚ್ಚು. ಹಾಗಂತ ಸುದ್ಧಿಗಳಿಗೆ ನ್ಯಾಯ ಒದಗಿಸದೇ ಇರೋದನ್ನ ಒಪ್ಪಿಕೊಳ್ಳೋದು ಸಾಧ್ಯವಿಲ್ಲ,  ಸಮೂಹ ಮಾಧ್ಯಮಗಳೂ ಕೂಡಾ ಕೆಲವೇ ಕೆಲವರ ಮುಖಸ್ತುತಿ ನಿಲ್ಲಿಸಬೇಕಿದೆ,  ಸದಾ ಸುದ್ಧಿಯ ಬೇಟೆಯಲ್ಲಿರೋ ಸುದ್ಧಿಗಾರಿನ ಕಾರ್ಯದಲ್ಲಿ ಜನಕೂಡಾ ಕೈ ಜೋಡಿಸಬೇಕು, ಸಮಸ್ಯೆಗಳ ಮೂಲಗಳನ್ನು ಸುದ್ಧಿಗಾರನಿಗೆ ನಿಲುಕಿಸಬೇಕು, ನಾವೆಷ್ಟು ಆಲಸಿಗಳಾಗಿಬಿಟ್ಟಿದ್ದೇವೆ ಅಂದ್ರೆ ನಮ್ಮ ನಡುವೆ ದೇಶದ್ರೋಹಿಗಳು ನಮ್ಮದೇ ನೆಲದಲ್ಲಿ ತರಬೇತಿ  ಪಡೆದುಕೊಂಡರೂ ನಮಗೆ ಗೊತ್ತೇ ಆಗಲಿಲ್ಲ, ನಮಗೆ ನಮ್ಮ ಸಮಸ್ಯೆಗಳೇ ದೊಡ್ಡದಾಗಿ ಕಾಣಿಸುತ್ತವೆ ಸುತ್ತಮುತ್ತ ಏನು ನಡೆಯುತ್ತದೆ ಅನ್ನುವದರ ಕಲ್ಪನೆಯೂ ನಮಗಿರೋದಿಲ್ಲ. ಇದು ಹೀಗಾಗ ಕೂಡದು ಸಮಾಜ ಕಟ್ಟುವಲ್ಲಿ ಸಮೂಹ ಮಾಧ್ಯಮಗಳ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನದ್ದೂ ಆಗಿದೆ,ಸಮಸ್ಯೆಗಳನ್ನು ಬಿಂಬಿಸುವದು ಸಮೂಹ ಮಾಧ್ಯಮಗಳ ಕೆಲಸ ಆದ್ರೆ ಆ ಸಮಸ್ಯೆಗಳಿಗೆ ಜನ ದ್ವನಿಯಾಗಿ ನಿಲ್ಲಬೇಕಾಗುತ್ತದೆ, ಆಗ ಸಮಸ್ಯೆ ಸಮಸ್ಯೆಯಾಗಿ ಉಳಿಯಲು ಸಾಧ್ಯವಿಲ್ಲ, ಜೊತೆಗೆ ಸದಭಿರುಚಿಯ ಸಮಾಜ ಮುಖಿ ಕಾರ್ಯಕ್ರಮಗಳಿಗೆ ಜನ ಒತ್ತುಕೊಟ್ರೆ ವ್ಯಾಪಾರದ ನಡುವೆನೂ ಮಾಧ್ಯಮಗಳು ಬದಲಾಗಬಲ್ಲವು. ಅವಾಗ ಮಾತ್ರ ಮಾಧ್ಯಮಗಳ ಮುಖ್ಯ ದ್ಯೇಯಕ್ಕೆ ನ್ಯಾಯ ಸಿಕ್ಕುತ್ತದೆ.

5 ಕಾಮೆಂಟ್‌ಗಳು:

  1. Casinos in South Africa - MapyRO
    Casino NameState/territoryNo. of Rooms4,482 (2796)2Total Games81869 (2896)3Total Games2,639 (1771)4Total Games3878 포항 출장마사지 (2896)1Total Games1527 (2896)4Total 고양 출장샵 Games1869 안성 출장샵 (2896)3Total 거제 출장안마 GamesView 22 more rows 구리 출장안마

    ಪ್ರತ್ಯುತ್ತರಅಳಿಸಿ